ಕಾಲ್ಡೆರ

ಜ್ವಾಲಾಮುಖಿಯಿಂದ ಪ್ರವಹಿಸಿದ ಲಾವಾ ಅಲ್ಲೇ ಘನೀಭವಿಸುವಾಗ ಉಂಟಾಗುವ ಮಹಾಕೂಪಸದೃಶ ತಗ್ಗು: ಅಥವಾ ಅತಿ ಭೀಕರ ಶಕ್ತಿಯಿಂದ ನೆಲ ಆಸ್ಫೋಟಿಸುವಾಗ ತಲೆದೋರುವ ಒಡಕು. ಅನೇಕ ಜ್ವಾಲಾಮುಖಿಗಳು ಉಕ್ಕುತ್ತಿರುವ ಲಾವಾ ಪ್ರವಾಹಗಳಿಂದ ದೊಡ್ಡದಾಗಿ ಬೆಳೆಯುತ್ತವೆ. ಕೆಲವೂಮ್ಮೆ ಪ್ರಚಂಡ ಸ್ಫೋಟನೆಗಳಿಂದ ಧ್ವಂಸವಾಗುತ್ತವೆ. ಅವುಗಳ ಕೋಡುಗಳು ಮಾತ್ರ ಕಿತ್ತು ಹೊರಬೀಳುತ್ತವೆ.  ಅನೇಕವೇಳೆ ಜ್ವಾಲಾಮುಖಿಯ ಕೋಡುಗಳೊಡನೆ ಇತರ ಭಾಗಗಳು ಸಿಡಿದು ಎಗರುತ್ತವೆ. ಈರೀತಿ ಸಿಡಿತದಿಂದ ಉತ್ಪನ್ನವಾದ ತಗ್ಗೇ ಕಾಲ್ಡೆರ. ಈ ಮಹಾಕೂಪದ ಅಗಲ ಅನೇಕ ಕಿಮೀ. ವರೆಗೂ ಇರುತ್ತದೆ. ಇವುಗಳ ಹೊರ ಮತ್ತು ಒಳಭಾಗ ಹೆಚ್ಚು ಕಡಿದಾಗಿರುತ್ತದೆ. ಒಳಭಾಗ ಜ್ವಾಲಾಮುಖಿಯ ಒಳರಚೆನೆಯನ್ನೂ ಬೆಳವಣಿಗೆಯನ್ನೂ ತೋರಿಸುತ್ತದೆ. ಕಾಲ್ಡೆರದ ಉದಾಹರಣೆಗಳಲ್ಲಿ ಈಸ್ಟ್ ಇಂಡೀಸ್ ದ್ವೀಪಗಳಲ್ಲಿರುವ ಕ್ರ್ಯಾಕಟೋವ ಅಲಾಸ್ಕದ ಮೌಂಟ್ ಕ್ಯಾಟ್ ಮೈ, ಜಪಾನಿನ ಬಂಡೈಸಾನ್ ಮತ್ತು ಇಟಲಿಯ ವಸೋವೀಯಸ್‍ಗಳು ಮುಖ್ಯವಾದವು.

(ಎಂ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ